ಮೈಸೂರು,ಏಪ್ರಿಲ್,14,2025 (www.justkannada.in): ಡಾ. ಬಿ ಆರ್ ಅಂಬೇಡ್ಕರ್ ರವರು ವಿಶ್ವಮಾನ್ಯರಾಗಿ ,ವಿಶ್ವ ಶ್ರೇಷ್ಠರಲ್ಲಿ ಅತಿ ಎತ್ತರವಾಗಿ ಎಲ್ಲೆಡೆ ನಿಂತಿದ್ದಾರೆ .ನಿತ್ಯ ಬೋಧಕರಾಗಿ ಮತ್ತು ಪರಿವರ್ತನೆಯ ದಿಕ್ಸೂಚಿಯಾಗಿದ್ದಾರೆ. ಇವರು ಶಾಶ್ವತವಾಗಿದ್ದಾರೆ. ಇವರ ಆಶಯಗಳನ್ನು ಅವಲೋಕಿಸಬೇಕಾದ ಅನಿವಾರ್ಯತೆ ಇದೆ.
ಸಂವಿಧಾನ ಜಾರಿಯಾದ ದಿನವೇ ಇವರ ಆಶಯಗಳು ಆರಂಭವಾಗಿದೆ. ಅದರ ಚಲನೆಯ ನಿಧಾನ ಮತ್ತು ಕೆಲವು ಉದಾಸೀನತೆಯನ್ನು ವೀಕ್ಷಿಸುತ್ತಿದ್ದ ಪ್ರಬುದ್ದ ಮನಗಳು 1970ರಲ್ಲಿ ಎಚ್ಚರಗೊಂಡು, ಲೇಖನಿ, ಬೀದಿ, ಬೋಧನೆ, ವೇದಿಕೆ, ಸುತ್ತೋಲೆಗಳಲ್ಲಿ ಗಟ್ಟಿ ಗೊಳಿಸಲಾಯಿತು. ಆ ನಡುವೆಯೂ ಮೂಲ ಆಶಯಕ್ಕೆ ಅನೇಕ ಶಸ್ತ್ರಚಿಕಿತ್ಸೆಗಳು ನಡೆದಿವೆ. ಈಗಲೂ ನಡೆಯುತ್ತಿದೆ. ವಿಶ್ವದ ಗುಲಾಮಗಿರಿಯಲ್ಲೇ ವಿಶಿಷ್ಠವಾದ ಜಾತಿ ವ್ಯವಸ್ಥೆಯು ಭಾರತದಲ್ಲಿತ್ತು.ಇಲ್ಲಿ ನಾಯಿಗಳಿಗೆ ಸಿಕ್ಕಷ್ಟು ಸೌಲಭ್ಯಗಳು ಮನುಷ್ಯರಿಗೆ ಸಿಗುತ್ತಿರಲಿಲ್ಲ. ದೇವಾಲಯ, ಶಾಲೆ, ನೀರು ಸಿಗದೆ ವಂಚಿತವಾಗಿದ್ದರೂ, ಬೀದಿಯಲ್ಲಿಟ್ಟ ಹೆಜ್ಜೆ ಗುರುತಿಗೂ ಕಷ್ಟವಾಗಿತ್ತು. ಇಂತಹ ಅಳಿಸಲಾಗದ ಜಾತಿ ಪದ್ದತಿಯನ್ನು 1916ರಲ್ಲಿ ಫ್ರೊ ಗೋಲ್ಡನ್ ವೀಜರ್ ಸ್ಮರಣಾರ್ಥದ ವಿಚಾರ ಸಂಕೀರ್ಣದಲ್ಲಿ ವಿಶ್ವದ ಮುಂದಿಟ್ಟಿದ್ದರು.
ಇದನ್ನು ಅಂಬೇಡ್ಕರ್ ರವರೇ ಹುಟ್ಟಿದಾಗ, ಬೆಳೆಯುವಾಗ, ಕಲಿಯುವಾಗ ಮತ್ತು ಸೇವೆ ಸಲ್ಲಿಸುವಾಗ ಅನುಭವಿಸಿದರು .ಜಾತಿಯನ್ನು ಬೇರು ಸಹಿತ ಕಿತ್ತುಹಾಕಲು ಮನುಸ್ಮೃತಿಯನ್ನು ಸುಟ್ಟುಹಾಕಿದರು. ಇಂದು ಈ ವ್ಯವಸ್ಥೆ ಪೂರ್ಣವಾಗಿ ನಿರ್ಮೂಲನೆಯಾಗದಿದ್ದರೂ ಉಸುರುಗಟ್ಟಿದ ವಾತಾವರಣದಿಂದ ಸ್ವಲ್ಪವೇ ಸ್ವಲ್ಪ ಹೊರಬಂದಿದೆ. ಆದರೆ ಬಹಿರಂಗಕ್ಕೂ ಅಂತರಂಗಕ್ಕೂ ಅಂತರದಲ್ಲಿದೆ .ಮುಂದೊಂದು ದಿನ ಇದು ಅಂತರಂಗಕ್ಕೂ ಬರುತ್ತದೆಂಬ ನಿರೀಕ್ಷೆಯೂ ಇದೆ. ಏಕೆಂದರೆ ವ್ಯವಹಾರದ ಹೃದಯವೇ ಮಮತೆಯನ್ನು ನೀಡಬೇಕಿದೆ. ಆಗಲೇ ಅದಕ್ಕೆ ಘನತೆಯು ಬರುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಇವರು ಬುದ್ದ ನಡೆಗೆ ಹೆಜ್ಜೆ ಇಟ್ಟು, ಜಾತಿಯಿಂದ ಮುಕ್ತಿಯಾದ ಬಗ್ಗೆ ಅನಂತವಾದುದು.
(ಜಾತಿ ನಿರ್ಮೂಲನೆತೆಗಾಗಿ ಬಸವಣ್ಷನವರ ಪರಿವರ್ತನೆ ಗಮನಿಸುವುದು ಸೂಕ್ತ).
ಬದುಕು ಇಂದು ಹಣಮಯವಾಗಿದೆ. ಇದಿಲ್ಲದ ಜೀವನವೇ ಶೂನ್ಯವಾಗಿದೆ. 1917ರಲ್ಲಿ ಭಾರತ ರಾಷ್ಟ್ರದ ಆದಾಯ ಒಂದು ಐತಿಹಾಸಿಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನದ ಫಲವಾಗಿ ಭಾರತದಲ್ಲಿ ಆರ್ಥಿಕ ವಿಕಾಸವಾಗಲು ಸಾಧ್ಯವಾಯಿತು. ಇದರೊಂದಿಗೆ 1922ರಲ್ಲಿ ರೂಪಾಯಿ ಸಮಸ್ಯೆ ವಿಷಯವನ್ನು ಲಂಡನ್ ನ ಸ್ಕೂಲ್ ಆಫ್ ಎಕಾನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್ ನಲ್ಲಿ ಮಂಡಿಸಿದ ಫಲವಾಗಿ RBI ಸಂಸ್ಥೆ ಸ್ಥಾಪನೆಗೂ ಮೂಲವಾಯಿತು.ಇವೆರಡರ ಶೋಧನೆಯು ಭಾರತದ ಆರ್ಥಿಕ ಸ್ಥಿರತೆ ಮತ್ತು ವಿಕಾಸಕ್ಕೆ ಸಾಕ್ಷಿಯಾಗಿದೆ. ಇಂದಿಗೂ ಭಾರತದಲ್ಲಿ ಅಕ್ಷರ ಅರಿಯದ ಮನುಷ್ಯ ಇದ್ದರೂ, ಹಣ ಬಳಸದ ಮನುಷ್ಯನಿಲ್ಲ. ಆದರೆ ಇಂದು ಹಣದ ಪ್ರಭಾವ ಪ್ರಶ್ನಾರ್ಹವಾಗುತ್ತಿದೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ಹೋಗಲಾಡಿಸುವ ಮಾರ್ಗ ಅನಿವಾರ್ಯವಿದೆ. ಹಣವೇ ಮಹಾಶಕ್ತಿಯಾದರೆ ಅಪಾಯವಿದೆ.
ಭಾರತಕ್ಕೆ ಮದ್ಯಪಾನ ಅವಶ್ಯಕತೆ ಇದೆಯೆ? ಇದು ವೈಭೋಗದ ವಸ್ತು. ಆರೋಗ್ಯದ ವಸ್ತುಗಳಾದ ಹಣ್ಣು ತರಕಾರಿ, ದವಸ-ಧಾನ್ಯಗಳಿಗಿಂತ ಮದ್ಯಪಾನವು ಉತ್ತಮವಾದ ಆರೋಗ್ಯಕರ ವಸ್ತುವಲ್ಲ.ಇದನ್ನು ಸೇವಿಸಿದ ವ್ಯಕ್ತಿಗೆ ಅನಾರೋಗ್ಯ, ಇದರಿಂದ ಕುಟುಂಬಕ್ಕೆ ಮತ್ತು ಸಮಾಜಕ್ಕೂ ಹಾನಿ.ಇದರ ಸೇವನೆಯಿಂದ ಸತ್ತವರ ಅಂಕಿ ಅಂಶಗಳೊಂದಿಗೆ ಪೆಲ್ಡಮನ್ ರವರ ಪಾನ ಪ್ರತಿಬಂಧಕ ವಿವರಣೆಯೊಂದಿಗೆ ವಿವರಿಸುತ್ತಾರೆ.
ಶ್ರೀಮಂತರು ಉತ್ತಮ ಆಹಾರ ಸೇವನೆಯೊಂದಿಗೆ ಕುಡಿಯುತ್ತಾರೆ. ಬಡವರು ಆಹಾರವಿಲ್ಲದೆ ಕುಡಿಯುತ್ತಾರೆ. ಆದ್ದರಿಂದ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಇವರ ಕಾಲೋನಿಗಲ್ಲಿ ಸಾರಾಯಿ ಅಂಗಡಿಗಳನ್ನು ತೆರೆಯುವುದಕ್ಕಿಂತ ಆಸ್ಪತ್ರೆ ಮತ್ತು ಶಾಲೆಗಳನ್ನು ತೆರೆಯಿರಿ. ಅಬಕಾರಿ ಕರ ಐಷಾರಾಮಿ ಕರವಾಗಲಿ. ಅಬಕಾರಿ ಕರ ಬೇಡ ಅಬಕಾರಿ ನಿವಾರಣೆ ಆಗಲಿ. ಅಂಬೇಡ್ಕರ್ ರವರ ಈ ಮಾತುಗಳನ್ನು ಅವಲೋಕಿಸಿದರೆ ಈಗ ನಾವೆಲ್ಲಿದ್ದೇವೆಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ.
ಇವರ ನಿಜವಾದ ಅನುಯಾಯಿಗಳಾಗಿದ್ದರೆ, ಕುಡಿತವನ್ನು ಈ ಕ್ಷಣವೆ ಬಿಟ್ಟು ಬಿಡಿ. ಅವರ ಮಾರ್ಗದಲ್ಲಿ ಧನ್ಯತೆ ಇದೆ. ಅರ್ಪಿಸಿಕೊಳ್ಳೋಣ. ಕುಡಿತದ ಹಣವನ್ನು ಸದ್ಬಳಕೆಗೆ ಮಾಡಿಕೊಳ್ಳೋಣ. ಏಕೆಂದರೆ ಇವರ ಆಶಯಗಳಿರುವುದೇ ನಮ್ಮ ಶ್ರಯೋಭಿವೃದ್ದಿಗೆ.
ವಿಶ್ವದಲ್ಲಿ ಹಲವಾರು ಸುಧಾರಕರಿದ್ದಾರೆ. ಸುಧಾರಣೆ ಬಗೆಗೆ ವಿಭಿನ್ನ ವಿಧಾನಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಂಬೇಡ್ಕರ್ ರವರು ಭಾರತದ ಸುಧಾರಣೆಗೆ ಆಯ್ಕೆ ಮಾಡಿಕೊಂಡಿದ್ದು ಶಿಕ್ಷಣ. ಅಕ್ಷರವೇ ಭಾರತದ ಪರಿವರ್ತನೆಗೆ ದಾರಿದೀಪ. ಇದನ್ನು ಸಂವಿಧಾನದಲ್ಲಿ ಕಡ್ಡಾಯಗೊಳಿಸಿದರು.
ನಹಿ ಜ್ಙಾನೇನು ಸದೃಶಂ ಎಂದು ಹೇಳಿದ ವರ್ಗವೇ ಶಿಕ್ಷಣವನ್ನು ವಂಚಿಸಿತ್ತು. ಇದನ್ನು ಇಂದಿಗೂ ಯಾರೂ ಗಳಿಸಲಾಗದಷ್ಟು ಜ್ಞಾನವನ್ನು, ಪದವಿಗಳನ್ನು ವಿಶ್ವದಲ್ಲೇ ಅವರೇ ಶ್ರಮವಹಿಸಿ ಪಡೆದು, ಮಾದರಿಯಾದರು. ಆ ಜ್ಙಾನವೇ ಭಾರತವನ್ನು ಬೆಳಗಿಸಲು ಸಾಧ್ಯ ಆಯಿತು.
ನಾವು ಕಲಿತ ಅಲ್ಪ ಅಕ್ಷರವೇ ನಮಗೆ ಬದುಕಲು ಜ್ಙಾನ ನೀಡಿದೆ. ಈ ಜ್ಙಾನವೇ ಬದುಕನ್ನು ಬದಲಿಸಿದೆ. ಭಾರತವು ಇಂದು ವಿಶ್ವಮಾನ್ಯತೆಯ ಮಾನವ ಸಂಪನ್ಮೂಲ ಒಳಗೊಂಡಿರಲು ಶಿಕ್ಷಣದಿಂದಲೆ ಸಾಧ್ಯವಾಗಿದೆ. ಜ್ಞಾನವನ್ನು ನೀಡುವ ಮಾರ್ಗ ಶಿಕ್ಷಣಕ್ಕೆ ಪರ್ಯಾಯವಾಗಿ ಯಾವುದೂ ಇರಲಿಲ್ಲ.
ಒಂದು ರಾಷ್ಟ್ರಕ್ಕೆ ಅಗತ್ಯವಾದ ವಿಷಯಗಳನ್ನು ಅಮೂಲಾಗ್ರವಾಗಿ ತಿಳಿದುಕೊಂಡಿದ್ದು ಮತ್ತು ಅವುಗಳನ್ನು ಕಾನೂನುಗೊಳಿಸಿ, ಉಲ್ಲಂಘನೆ ಆಗದಂತೆ ಭದ್ರಗೊಳಿಸಿದ್ದು ಜಗತ್ತಿನಲ್ಲಿ ಅಪರೂಪ. ಆಳುವ ವರ್ಗ ಮತ್ತು ಮತದಾರ ಮಾತ್ರ ಇವುಗಳನ್ನು ಅರ್ಥೈಸಿಕೊಳ್ಳಬೇಕಿದೆ.
ಸ್ವಾತಂತ್ರ್ಯದ ಸಂದರ್ಭಕ್ಕೂ ಇಂದಿನ ಪರಿಸ್ಥಿತಿಗೂ ಹೋಲಿಕೆ ಮಾಡಿಕೊಂಡರೆ ಸ್ವಲ್ಪ ಸಮಾಧಾನವಿದೆ. ಮಹಿಳೆಗೂ, ಮಕ್ಕಳಿಗೂ, ಎಲ್ಲಾ ಮಾದರಿಯ ವೇತನದಾರರಿಗೂ, ದುಡಿಮೆದಾರರಿಗೂ, ಬಂಡವಾಳಗಾರಿಗೂ ಕೋರತೆಯಿಲ್ಲದ ಕಾನೂನುಗಳನ್ನು ಇವರು ಭದ್ರಗೊಳಿಸಿರುವಷ್ಟು,ರಾಜಾಶ್ರಯ, ಧಾರ್ಮಿಕ ವ್ಯವಸ್ಥೆ ಮತ್ತು ಇತರೆ ಮಾದ್ಯಮಗಳು ಭದ್ರಗೊಳಿಸಿಲ್ಲ.
ಜನಸಂಖ್ಯೆ ಮತ್ತು ಆಸ್ತಿ ಹೆಚ್ಚಳವಾದರೆ, ಅದರ ಅಪಾಯವನ್ನು, ನಿರುದ್ಯೋಗ ಇದ್ದರೆ ಸಮಾಜದ ದುಸ್ಥಿತಿಯನ್ನೂ, ಪರಿಸರ ನಾಶವಾದರೆ ಭೂಮಿಯ ವಿನಾಶವನ್ನೂ, ಜೈವಿಕ ಮತ್ತು ಸಾಮಾಜಿಕ ಅಸಮತೋಲನವನ್ನು ಮುಂದುವರೆದರೆ ಅನಾಹುತವನ್ನು ಸೋದಾರಣವಾಗಿ ಭಾಗಿಯಾದವರ ಸಮ್ಮುಖದಲ್ಲಿ ಚರ್ಚಿಸಿ, ಸಂವಿಧಾನದಲ್ಲಿ ಮನಗಾಣಿಸಿದ್ದಾರೆ.
ಸಂವಿಧಾನದಲ್ಲಿರುವ ಅಧಿಕಾರ ಮತ್ತು ಸೌಲಭ್ಯಗಳನ್ನು ಕೇಳುವಂತೆ ಇತರೆ ಜವಾಬ್ದಾರಿಗಳನ್ನು ಹೊತ್ತುಕೊಳ್ಳಬೇಕಿದೆ. 2010ರವರೆವಿಗೂ ಅಂಬೇಡ್ಕರ್ ವಿಚಾರಗಳು, ಅವರ ಪ್ರತಿಮೆಗಳು, ವತ್ತಿಗೆಗಳು ಹೆಚ್ಚಿನ ಮಟ್ಟದಲ್ಲಿ ವಿಘ್ನವಾಗುತ್ತಿದ್ದವು ಮತ್ತು ಭಗ್ನಗೊಳ್ಳುತ್ತಿದ್ದವು. ಈಗ ಅರ್ಥವಂತಿಕೆ ,ಆನಂದತೆ ಮತ್ತು ಅನಿವಾರ್ಯತೆಯಿಂದ ಇವರ ಮೇಲಿನ ಅಭಿಮಾನ ,ಭಕ್ತಿ, ಭಾಗವಹಿಸುವಿಕೆ ಮತ್ತು ಆದರಣೀಯತೆ ಹೆಚ್ಚಿರುವುದು ಸಂತೋಷದಾಯಕವಾಗಿದೆ.
ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇವರ ಜಯಂತಿಗಳು ಸೀಮಿತವಾಗಿದ್ದವು. ಈಗ ಸ್ವಾಭಿಮಾನದ ಸಂಕೇತ ಮತ್ತು ಸರ್ಕಾರದ ಗೌರವವು ಪ್ರತಿ ಹಳ್ಳಿಗೂ ತಲುಪಿ, ಮಹಾನಾಯಕರ ಜನ್ಮದಿನವು ಮಹತ್ವದ್ದಾಗಿದೆ. ಈ ನಡೆಯಿಂದಾದರೂ ಗ್ರಾಮಗಳ ಸಾಮಾಜಿಕ ವ್ಯವಸ್ಥೆ ಮಡಿಕೆವಂತಿಕೆ ಮತ್ತು ಮೌಢ್ಯತೆಯಿಂದ ಹೊರಬರುವ ಅಗತ್ಯತೆ ಇದೆ.
ಉದ್ದನೂರು ಮಹಾದೇವ ನಾಯಕ.
ಸಾಮಜಿಕ ಚಿಂತಕ,ಮುಖ್ಯ ಲೆಕ್ಕಾಧಿಕಾರಿ
Key words: Constitution, Dr. B.R. Ambedkar Jayanthi
The post ಸಮಾಜ ಶಿಲ್ಪಿ, ಪರಿವರ್ತನೆಯ ದಿಕ್ಸೂಚಿ ಡಾ. ಬಿ.ಆರ್ ಅಂಬೇಡ್ಕರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.