ಬೆಂಗಳೂರು,ಏಪ್ರಿಲ್,12,2025 (www.justkannada.in): ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖ ಪ್ರಶಸ್ತಿಗಳಲ್ಲೊಂದಾದ ‘ಕನ್ನಡ ಚಳವಳಿ ವೀರ ಸೇನಾನಿ ಮ.ರಾಮಮೂರ್ತಿ ದತ್ತಿ ಪ್ರಶಸ್ತಿ’ಗೆ ಮೈಸೂರಿನ ಕನ್ನಡ ಹೋರಾಟಗಾರ ಸ.ರ.ಸುದರ್ಶನ್ ಅವರನ್ನು ಆಯ್ಕೆ ಮಾಡಲಾಗಿದೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಕನ್ನಡ ಚಳುವಳಿಗೆ ಶಕ್ತಿಯನ್ನು, ಹೋರಾಟದ ಸ್ಪೂರ್ತಿಯನ್ನು ತುಂಬಿದಂತಹ ಮ.ರಾಮಮೂರ್ತಿಯವರ ಹೆಸರಿನಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದತ್ತಿಯನ್ನು ಸ್ಥಾಪಿಸಿದ್ದು ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿಗಳ ರಕ್ಷಣೆಗೆ ಹಾಗೂ ಪ್ರಗತಿಗೆ ಶ್ರಮಿಸಿ ಎಲೆ ಮರೆಯ ಕಾಯಿಗಳಂತಿರುವ ಕನ್ನಡ ಕಾರ್ಯಕರ್ತರಿಗೆ ಈ ಗೌರವ ಸಲ್ಲಬೇಕೆಂದು ಆಶಿಸಿದ್ದಾರೆ.
2025ನೆಯ ಸಾಲಿಗೆ ಈ ಪುರಸ್ಕಾರಕ್ಕೆ ಪಾತ್ರರಾಗಿರುವ ಮೈಸೂರಿನ ಸ.ರ.ಸುದರ್ಶನ ಗೋಕಾಕ್ ಚಳುವಳಿಯ ಆರಂಭದಿಂದಲೂ ಕನ್ನಡ ಹೋರಾಟದಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು, ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿಸಲು, ಕನ್ನಡಕ್ಕೆ ದೊರೆತ ಶಾಸ್ತ್ರೀಯ ಸ್ಥಾನಮಾನದ ಸದ್ಭಳಕೆ ಕುರಿತು ಹೀಗೆ ನಿರಂತರವಾಗಿ ಕನ್ನಡಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಆಡಳಿತ ಪದಕೋಶ ಸೇರಿ ಕನ್ನಡಪರ ಕೃತಿಗಳನ್ನು ಲೇಖನಗಳನ್ನು ರಚಿಸಿ ನಾಡು ಮತ್ತು ನುಡಿಯ ಪರವಾಗಿ ಸದಾ ಮಿಡಿಯುತ್ತಾ ಬಂದಿದ್ದಾರೆ.
ನಾಡೋಜ ಡಾ.ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ಸೇರಿದ್ದ ಆಯ್ಕೆ ಸಮಿತಿಯು ಪಾರದರ್ಶಕವಾಗಿ ಮತ್ತು ಕೂಲಂಕಶವಾಗಿ ಪರಿಶೀಲಿಸಿ ಸ.ರ ಸುದರ್ಶನ ಅವರನ್ನು ಈ ಪುರಸ್ಕಾರಕ್ಕಾಗಿ ಆಯ್ಕೆ ಮಾಡಿದೆ. ಆಯ್ಕೆ ಸಮಿತಿಯಲ್ಲಿ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು , ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಮತ್ತು ದತ್ತಿದಾನಿಗಳ ಪರವಾಗಿ ಟಿ.ತಿಮ್ಮೇಶ್ ಭಾಗವಹಿಸಿದ್ದರು.
Key words: Sa. Ra. Sudarshan, selected, M. Ramamurthy Charity award
The post ‘ಕನ್ನಡ ಚಳವಳಿ ವೀರಸೇನಾನಿ ಮ.ರಾಮಮೂರ್ತಿ ದತ್ತಿ ಪ್ರಶಸ್ತಿ’ಗೆ ಸ.ರ.ಸುದರ್ಶನ್ ಆಯ್ಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.