ಮೈಸೂರು,ಮಾರ್ಚ್,27,2025 (www.justkannada.in): ನಿನ್ನೆ ಹುಣಸೂರು ಶಾಸಕ ಜಿ.ಡಿ ಹರೀಶ್ ಗೌಡ ನೇತೃತ್ವದಲ್ಲಿ ಎಂಡಿಸಿಸಿ ಬ್ಯಾಂಕ್ ಎದುರು ರೈತರ ಹೋರಾಟ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕ ಹೆಚ್ ಪಿ ಮಂಜುನಾಥ್, ನಿನ್ನೆಯ ಹೋರಾಟ ರೈತರಿಗಾಗಿ ನಡೆದಿಲ್ಲ. ಹಣ ಗುಳುಂ ಮಾಡಿರುವವರ ಪರವಾಗಿ ನಡೆದಿದೆ. ಸೆಕ್ರೆಟರಿಗಳ ರಕ್ಷಣೆ ಮಾಡಲು ಹೋರಾಟ ಮಾಡಿದ್ದಾರೆ ಎಂದು ಕಿಡಿಕಾರಿದರು.
ಇಂದು ಮೈಸೂರಿನಲ್ಲಿ ಮಾತನಾಡಿದ ಹೆಚ್ ಪಿ ಮಂಜುನಾಥ್ , ನನ್ನ ಹದಿನೈದು ವರ್ಷಗಳ ಅವಧಿಯಲ್ಲಿ ಜನಪರ ಕಾರ್ಯಗಳನ್ನು ಮಾಡಿದ್ದೇನೆ. 2008ರಲ್ಲಿ ಗೊಬ್ಬರಕ್ಕೆ ಅಭಾವ ಉಂಟಾದಾಗ ಹುಣಸೂರು ರೈತರಿಗೆ ವೈಯುಕ್ತಿಕವಾಗಿ 36 ಲಕ್ಷ ರೂಪಾಯಿ ವೆಚ್ಚದಲ್ಲಿ 27 ಸೊಸೈಟಿಗಳಿಗೆ ಗೊಬ್ಬರ ಪೂರೈಕೆ ಮಾಡಿದೆ. ನಾನು ರೈತ ವಿರೋಧೀನಾ? ದೇವರಾಜ ಅರಸು ಅವರ ಕಾಲಿನ ಧೂಳಿಗೂ ನಾವು ಸಮವಲ್ಲ. ಅರಸುವರು ಕ್ಷೇತ್ರಕ್ಕೆ 4 ಏತ ನೀರಾವರಿ ಯೋಜನೆ ತಂದಿದ್ದಾರೆ. ನಾನು 11 ಏತ ನೀರಾವರಿ ಯೋಜನೆ ಮಾಡಿದ್ದೇನೆ. 21 ಸಾವಿರ ಹೆಕ್ಟೇರ್ ಗೆ ನೀರು ಕೊಟ್ಟಿದ್ದೇನೆ. ನಾಲೆಗಳ ಆಧುನೀಕರಣದ ಮೂಲಕ 38 ಸಾವಿರ ಹೆಕ್ಟೇರ್ ಪ್ರದೇಶದ ರೈತರಿಗೆ ಅನುಕೂಲ ಮಾಡಿದ್ದೇನೆ. ಉಂಡುವಾಡಿ ಯೋಜನೆ ತಂದಿದ್ದೇ ನಾನು. ಕೆರೆಗಳಿಗೆ ನೀರು ತುಂಬುವ ಯೋಜನೆ ಜಾರಿಗೊಳಿಸಿದೆ. ಈಗಲೂ ತಾಲೂಕಿನ ಎಲ್ಲಾ ಕೆರೆಗಳಿಗೂ ನೀರು ಇದೆ. ರೈತರಿಗೆ ನಾನು ಇಷ್ಟೆಲ್ಲಾ ಮಾಡಿದ್ದೇನೆ. ಹಾಗಾದರೆ ಇವರು ನಿನ್ನೆ ಯಾರಿಗೋಸ್ಕರ ಹೋರಾಟ ಮಾಡಿದರು? ಧರ್ಮಾಪುರ ಮತ್ತು ಹೆಗ್ಗಂದೂರು ಸೊಸೈಟಿಗಳಿಗೋಸ್ಕರ ಇವರು ನಿನ್ನೆ ಹೋರಾಟ ಮಾಡಿದ್ದಾರೆ. ರೈತ ಕಟ್ಟಿದ ಹಣವನ್ನು ಸೆಕ್ರಟರಿಗಳು ತಿಂದುಕೊಂಡಿದ್ದಾರೆ. ರೈತರು ಸಾಲ ತೀರಿಸಿದ್ದರೂ ಸಾಲ ಸಿಗುತ್ತಿಲ್ಲ. ಹಣ ಗುಳುಂ ಮಾಡಿರುವವರ ಪರವಾಗಿ ಇವರು ಹೋರಾಟ ಮಾಡಿದ್ದಾರೆ. ಸೆಕ್ರೆಟರಿಗಳ ರಕ್ಷಣೆ ಮಾಡಲು ಹೋರಾಟ ಮಾಡಿದ್ದಾರೆ. ಇವರ ಹೋರಾಟ ರೈತರಿಗಾಗಿ ನಡೆದಿಲ್ಲ. ಕೇವಲ 91 ಜನರಿಗೋಸ್ಕರ ಹೋರಾಟ ಮಾಡಿದ್ದಾರೆ. ಧರ್ಮಾಪುರ ಸೊಸೈಟಿಯಲ್ಲಿ ಆಡಿಟ್ ನಡೆದಿಲ್ಲ. ಆಡಿಟ್ ನಡೆಯದೇ ಸಾಲ ಹೇಗೆ ಕೊಡುತ್ತಾರೆ? ಎಂದು ಪ್ರಶ್ನಿಸಿದರು.
ಹನಗೋಡು ಸೊಸೈಟಿಯಲ್ಲಿ ನಾಲ್ಕು ಕೋಟಿ ಅವ್ಯವಹಾರ ನಡೆದಿದೆ. ರೈತರು ಕಟ್ಟಿರುವ ಹಣವನ್ನು ಅಲ್ಲಿನ ಕಾರ್ಯದರ್ಶಿ ಕೊಂಡೊಯ್ದಿದ್ದಾನೆ. ಸತ್ತವರ ಹೆಸರಿನಲ್ಲೂ ಸಾಲ ಮಂಜೂರು ಮಾಡಿ ತಿಂದಿದ್ದಾರೆ. ಇದೀಗ ಸತ್ತವರ ಮಕ್ಕಳು ಕುಟುಂಬ ಸದಸ್ಯರಿಗೆ ನೋಟಿಸ್ ಬಂದಿವೆ ಎಂದು ಶಾಸಕ ಹೆಚ್ ಪಿ ಮಂಜುನಾಥ್ ಆರೋಪಿಸಿದರು.
Key words: mysore, farmer, protest, Former MLA, HP Manjunath
The post ಹನಗೋಡು ಸೊಸೈಟಿಯಲ್ಲಿ 4 ಕೋಟಿ ಅವ್ಯವಹಾರ: ನಿನ್ನೆಯ ಹೋರಾಟ ರೈತರಿಗಾಗಿ ನಡೆದಿಲ್ಲ- ಮಾಜಿ ಶಾಸಕ ಹೆಚ್ ಪಿ ಮಂಜುನಾಥ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.