ಮೈಸೂರು,ಮಾರ್ಚ್,24,2025 (www.justkannada.in): ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಬಿಜೆಪಿ 18 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ಯುಟಿ ಖಾದರ್ ಅವರ ನಡೆಯನ್ನ ಕಾಂಗ್ರಸ್ ಶಾಸಕ ಅನಿಲ್ ಚಿಕ್ಕಮಾದು ಸಮರ್ಥಿಸಿಕೊಂಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು, ಬಿಜೆಪಿ ಶಾಸಕರು ಸಭಾಧ್ಯಕ್ಷರಿಗೆ ಅಗೌರವ ತೋರಿದ್ದಾರೆ. ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ಅಸಭ್ಯ ವರ್ತನೆ ತೋರಿದ 18 ಶಾಸಕರ ಮೇಲೂ ಸ್ಪೀಕರ್ ಅಮಾನತು ಆದೇಶ ಮಾಡಿದ್ದಾರೆ. ಅಮಾನತು ಅವಧಿ 6 ತಿಂಗಳಲ್ಲ ಕನಿಷ್ಠ 2 ವರ್ಷಗಳ ಕಾಲ ಮಾಡಬೇಕಿತ್ತು ಬಿಜೆಪಿಯವರು ನಡೆದುಕೊಂಡ ರೀತಿ ಬಹಳ ಖಂಡನೀಯ. ನಮಗಂತು ಬಹಳ ಬೇಸರ ತಂದಿದೆ. ಇದೊಂದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹನಿಟ್ರ್ಯಾಪ್ ವಿಚಾರ: ತಪ್ಪಿತಸ್ಥರು ಯಾರೇ ಆದರೂ ಸೂಕ್ತ ಕಾನೂನು ಕ್ರಮ ಆಗಲಿ.
ರಾಜ್ಯ ರಾಜಕಾರಣದಲ್ಲಿ ದೊಡ್ಡ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಅನಿಲ್ ಚಿಕ್ಕಮಾದು, ಈ ವಿಚಾರ ಮಾತನಾಡಲು ನಾನು ಇನ್ನೂ ಚಿಕ್ಕವನು. ಈಗಾಗಲೇ ಸರ್ಕಾರ ಉನ್ನತಮಟ್ಟದ ತನಿಖೆ ನಡೆಸಲು ಮುಂದಾಗಿದೆ. ಯಾರೇ ಆಗಲಿ ಇಂತಹ ವಿಚಾರದ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು. ಹನಿಟ್ರ್ಯಾಪ್ ನಂತಹ ಷಡ್ಯಂತ್ರ ಮಾಡೋದು ಬಹಳ ತಪ್ಪು. ತನಿಖೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ತಪ್ಪಿತಸ್ಥರು ಯಾರೇ ಆದರೂ ಸೂಕ್ತ ಕಾನೂನು ಕ್ರಮ ಆಗಲಿ. ಡಿಕೆ ಶಿವಕುಮಾರ್ ಅವರ ಮೇಲೆ ಬಿಜೆಪಿ ನಾಯಕರು ಮಾಡುವುದು ಕೇವಲ ಆರೋಪ ಅಷ್ಟೇ. ಯಾರು ತಪ್ಪು ಮಾಡಿದ್ದಾರೆ ಅನ್ನೋದು ತನಿಖೆಯಿಂದ ಗೊತ್ತಾಗಲಿದೆ. ಇಂತಹ ವಿಚಾರದಲ್ಲಿ ನಮ್ಮಂತವರು ಎಚ್ಚರಿಕೆಯಿಂದಿರಬೇಕು. ಇಂತಹ ವ್ಯವಸ್ಥೆ ಸಮಾಜಕ್ಕೆ ಮಾರಕ ಎಂದು ನುಡಿದರು.
ಬಜೆಟ್ ನಲ್ಲಿ ಎಚ್.ಡಿ ಕೋಟೆ ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನ ಸಿಎಂ ಕೊಟ್ಟಿದ್ದಾರೆ. ಮಳವಳ್ಳಿಯಿಂದ ಬಾವುಲಿ ಚೆಕ್ ಪೋಸ್ಟ್ ವರಗಿನ ರಾಜ್ಯ ಹೆದ್ದಾರಿ ಕಾಮಗಾರಿಗೆ ವಿಶೇಷ ಅನುದಾನ ಘೋಷಣೆ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಮುಖ್ಯವಾಗಿ ರಸ್ತೆಗಳ ಅಭಿವೃದ್ಧಿ ಆಗಬೇಕಿದೆ. ಈಗಾಗಲೇ ಗಿರಿಜನ ಕಲ್ಯಾಣ ಅಭಿವೃದ್ಧಿಗಾಗಿ ಸುಮಾರು 200 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಕ್ಷೇತ್ರದ ವಿವಿಧ ಕಾಮಗಾರಿಗಳಿಗೂ ಅನುದಾನ ಕೊಟ್ಟಿದ್ದಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
Key words: Speaker, suspended, BJP MLAs, MLA, Anil Chikkamadu
The post ಬಿಜೆಪಿ ಶಾಸಕರನ್ನ 6 ತಿಂಗಳಲ್ಲ 2 ವರ್ಷ ಸಸ್ಪೆಂಡ್ ಮಾಡಬೇಕಿತ್ತು- ಶಾಸಕ ಅನಿಲ್ ಚಿಕ್ಕಮಾದು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.