ಮೈಸೂರು,ಫೆಬ್ರವರಿ,11,2025 (www.justkannada.in): ಶಾಂತವಾಗಿದ್ದ ಮೈಸೂರಿನಲ್ಲಿ ರಾತ್ರೋರಾತ್ರಿ ಶಾಂತಿ ಕದಡುವ ಕೆಲಸ ನಡೆದಿದೆ. ಬೆಂಗಳೂರಿನ ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ನಡೆದ ಮಾದರಿಯಲ್ಲಿ ಮೈಸೂರಿನಲ್ಲೂ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆದಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ವಕ್ತಾರ ಎಂ. ಜಿ ಮಹೇಶ್ ಆಗ್ರಹಿಸಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ವಕ್ತಾರ ಎಂ. ಜಿ ಮಹೇಶ್, ಈಗಿನ ರಾಜ್ಯ ಸರ್ಕಾರದ ಅವಧಿಯಲ್ಲಿ ನಡೆದಿರುವ ಐದನೇ ಘಟನೆ ಇದಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದ್ದು, ನೆಪ ಮಾತ್ರಕ್ಕೆ ಸರ್ಕಾರ ಇದೆಯಷ್ಟೇ. ಪೊಲೀಸ್ ಠಾಣೆ ಬಳಿಯೇ ಸರ್ತನ್ ಕಿ ಜುದಾ ಎಂದು ಘೋಷಣೆ ಕೂಗುತ್ತಾರೆ. ಗೃಹ ಸಚಿವರಿಗೆ ತಾಕತ್ ಇಲ್ಲ. ಎನ್ ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಕತ್ತು ಸೀಳುವ ಕೆಲಸ ಮಾಡಿದರು. ಆದರೂ ತನ್ವೀರ್ ಸೇಠ್ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ನೀವು ಈ ರೀತಿ ಮಾಡಿದರೆ ಹೆದರುವುದಿಲ್ಲ. ನಾವೇನು ಬಳೆ ತೊಟ್ಟಿಕೊಂಡಿಲ್ಲ ಎಂದು ಹರಿಹಾಯ್ದರು.
ರಾತ್ರೋರಾತ್ರಿ ಸಾವಿರಾರು ಜನರು ಜಮಾವಣೆ ಆಗಿದ್ದಾರೆ. ಇಂಟೆಲಿಜೆನ್ಸ್ ಫುಲ್ ಫೇಲ್ಯೂರ್ ಆಗಿದೆ. ರಾಜ್ಯದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ. ಮೈಸೂರಿನಲ್ಲಿ ನಡೆದಿರುವ ಅಹಿತಕರ ಘಟನೆ ಕಾಂಗ್ರೆಸ್ ನ ಷಡ್ಯಂತ್ರದ ಒಂದು ಭಾಗವಾಗಿದೆ. ಉದಯಗಿರಿಗೆ, ಪೊಲೀಸರು ಮಾತ್ರವಲ್ಲದೇ ಮಾಧ್ಯಮ ಪ್ರತಿನಿಧಿಗಳು ನಿರ್ಭೀತಿಯಿಂದ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಎಂ ಜಿ ಮಹೇಶ್ ಆಗ್ರಹಿಸಿದರು.
ಕಾಂಗ್ರೆಸ್ ಗೆ ಮುಸ್ಲಿಮರು ವೋಟ್ ಹಾಕಿದ್ದಾರೆ ಅಂತ ಓಲೈಕೆ ಮಾಡ್ತಿದ್ದೀರಾ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಮಾಡಿದವರನ್ನ ಡಿಕೆ ಶಿವಕುಮಾರ್ ಬ್ರದರ್ಸ್ ಅಂತ ಕರೆದರು. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಾಟೆ ಪ್ರಕರಣದಲ್ಲಿ ಜಮೀರ್ ಅಹ್ಮದ್ ಖಾನ್ ಆರೋಪಿಗಳ ಪರ ನಿಂತರು. ಜೈಲಿನಿಂದ ಬಿಡುಗಡೆ ಆದವರನ್ನ ಮೆರವಣಿಗೆ ಮೂಲಕ ಕರೆ ತಂದಿರಿ. ಬಳಿಕ ಅಖಂಡ ಶ್ರೀನಿವಾಸ್ ಮೂರ್ತಿ ಪರ ಕಾಂಗ್ರೆಸ್ ನಿಲ್ಲಲಿಲ್ಲ ಎಂದು ಎಂ.ಜಿ ಮಹೇಶ್ ವಾಗ್ದಾಳಿ ನಡೆಸಿದರು.
Key words: Udayagiri police station, attack, BJP, spokesperson
The post ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಕೇಸ್: ಗೃಹ ಸಚಿವರ ರಾಜೀನಾಮೆಗೆ ಬಿಜೆಪಿ ವಕ್ತಾರ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.