ಮಂಗಳೂರು,ಫೆಬ್ರವರಿ,10,2025 (www.justkannada.in): ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಂಕನಾಡಿ ನಗರ ಪೊಲೀಸ್ ಠಾಣೆ ಕಾನ್ ಸ್ಟೆಬಲ್ ಹರೀಶ್ (28) ಎಂಬುವರು ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ.
ಹರೀಶ್ ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕು ಗಾಯನಹಳ್ಳಿ ಗ್ರಾಮದ ನಿವಾಸಿಯಾಗಿದ್ದರು. ಬುಧವಾರ ಮಾಣಿ-ಮೈಸೂರು ರಸ್ತೆಯ, ಸುಳ್ಯ ತಾಲೂಕಿನ ಅರಂತೋಡು ಬಳಿ ಅವರು ಚಲಾಯಿಸುತ್ತಿದ್ದ ಬೈಕ್ ಅಪಘಾತವಾಗಿ ತಲೆಗೆ ಗಂಭೀರ ಸ್ವರೂಪದಲ್ಲಿ ಗಾಯವಾಗಿತ್ತು.
ಮಿದುಳು ನಿಷ್ಕ್ರಿಯಗೊಂಡಿರುವ ಹರೀಶ್ ಅವರ ಅಂಗಾಂಗದಾನ ಬಗ್ಗೆ ವೈದ್ಯರು ಮನೆಯವರಿಗೆ ಸಲಹೆ ನೀಡಿದರು. ಅದಕ್ಕೆ ಸಹೋದರ ಗಿರೀಶ್, ತಂದೆ ಲಿಂಗದೇವರು, ತಾಯಿ ರೇಣುಕಾ ಸಮ್ಮತಿ ಸೂಚಿಸಿದ್ದು, ಕಣ್ಣು, ಲಿವರ್, ಕಿಡ್ನಿ ಮೊದಲಾದ ಅಂಗಾಂಗಳನ್ನು ದಾನ ಮಾಡಲಾಯಿತು. ಇದರಿಂದ ಮೂರ್ನಾಲ್ಕು ಮಂದಿಗೆ ಹೊಸ ಬದುಕು ಸಿಗಲಿದೆ. ಈ ಮೂಲಕ ಹರೀಶ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಹರೀಶ್ ಅವರ ಮೃತದೇಹವನ್ನು ಸೋಮವಾರ ಅಂತಿಮ ದರ್ಶನಕ್ಕೆ ಇಡಲಾಗುವುದು. ಪೊಲೀಸ್ ಗೌರವದ ಬಳಿಕ ಅವರ ಹುಟ್ಟೂರಿಗೆ ಮೃತದೇಹವನ್ನು ಕೊಂಡೊಯ್ಯಲಾಗುವುದು ಎಂದು ಅವರ ಸಹೋದ್ಯೋಗಿಗಳು ಮಾಹಿತಿ ನೀಡಿದ್ದಾರೆ.
ವಿವಾಹ ನಿಶ್ಚಿತಾರ್ಥ ನಡೆದಿತ್ತು
ಫೆ.2ರಂದು ಹರೀಶ್ ಅವರ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಇದಕ್ಕಾಗಿ ರಜೆಯಲ್ಲಿ ತೆರಳಿದ್ದ ಅವರು ಫೆ.5ರಂದು ಕರ್ತವ್ಯಕ್ಕೆ ಹಾಜರಾಗಲು ಬೈಕ್‌ನಲ್ಲಿ ಮಂಗಳೂರಿಗೆ ಬರುತ್ತಿದ್ದಾಗ ಅಪಘಾತವಾಗಿತ್ತು. ಯಾವ ರೀತಿ ಅಪಘಾತ ಎಂಬುದು ಇನ್ನೂ ಪತ್ತೆಯಾಗಿಲ್ಲ. ಇಳಿಜಾರಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದಿದೆಯೇ ಅಥವಾ ಯಾವುದಾದರೂ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ.
Key words: mysore, death, Constable, donated, organs
The post ಸಾವಿನಲ್ಲೂ ಸಾರ್ಥಕತೆ: ಅಂಗಾಂಗ ದಾನ ಮಾಡಿದ ಕಾನ್ಸ್‌ಟೇಬಲ್.. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.