ಮೈಸೂರು,ಜನವರಿ,29,2025 (www.justkannada.in): ಒತ್ತುವರಿ ಆಗಿರುವ ಎಪಿಎಂಸಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ್ ಅವರು ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮೈಸೂರಿನಲ್ಲಿ ಬುಧವಾರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಎಪಿಎಂಸಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಶಿವಾನಂದ್ ಪಾಟೀಲ್, ಯಾವ ಯಾವ ಎಪಿಎಂಸಿಗಳ ಎಷ್ಟು ಭೂಮಿ ಒತ್ತುವರಿ ಆಗಿದೆ ಎಂಬ ಮಾಹಿತಿ ಪಡೆದು, ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದರೆ ತಕ್ಷಣ ತೆರವಿಗೆ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದ ಒತ್ತುವರಿ ಆಗಿದ್ದರೆ ಸಂಬಂಧಪಟ್ಟ ಇಲಾಖೆಯಿಂದ ಪರಿಹಾರ ಪಡೆಯಲು ತಕ್ಷಣ ಪತ್ರ ಬರೆಯಬೇಕು ಎಂದು ಸೂಚಿಸಿದರು. ರಾಷ್ಟೀಯ ಹೆದ್ದಾರಿ ನಿರ್ಮಾಣಕ್ಕೆ ನಂಜನಗೂಡು ಎಪಿಎಂಸಿಯ 12 ಗುಂಟೆ ಭೂಮಿಯನ್ನು ಬಳಕೆ ಮಾಡಿಕೊಂಡಿದ್ದರೂ ಇದುವರೆಗೆ ಪರಿಹಾರಕ್ಕೆ ಏಕೆ ಪ್ರಯತ್ನಿಸಿಲ್ಲ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ತರಾಟೆ ತೆಗೆದುಕೊಂಡರು.
ಟಿ. ನರಸೀಪುರದಲ್ಲಿ ಎಪಿಎಂಸಿ ಕಟ್ಟಡವನ್ನು ನಾಡಕಚೇರಿಗೆ ಬಾಡಿಗೆ ನೀಡಲಾಗಿದ್ದು, 22 ಲಕ್ಷ ರೂ. ಬಾಡಿಗೆ ಬರಬೇಕಾಗಿದೆ. ಆರಂಭದಿಂದಲೂ ಇದುವರೆಗೆ ಬಾಡಿಗೆ ಬಂದಿಲ್ಲ ಎಂಬ ವಿಷಯ ತಿಳಿದ ಸಚಿವರು, ಈ ಹಣ ಪಾವತಿಗೆ ಕಂದಾಯ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ವ್ಯವಹಾರ ಮಾಡುವುದು ಅಧಿಕಾರಿಗಳ ಜವಾಬ್ದಾರಿ. ಯಾವುದೇ ಉತ್ಪನ್ನದ ಬೆಲೆ ಕುಸಿದಾಗ ಸರ್ಕಾರ ಬೆಲೆ ಸ್ಥಿರತೆಗೆ ಮಧ್ಯಪ್ರವೇಶ ಮಾಡಬೇಕು. ಆದ್ದರಿಂದ ಅಧಿಕಾರಿಗಳು ಕೃಷಿ ಉತ್ಪನ್ನಗಳ ಬೆಲೆ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಬೆಂಬಲ ಬೆಲೆಯಲ್ಲಿ ರಾಗಿ, ಭತ್ತ ಖರೀದಿ ಪ್ರಮಾಣ ಮತ್ತು ಲೋಪದೋಷಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಎಪಿಎಂಸಿ ಕಾರ್ಯದರ್ಶಿಗಳು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಮಾಹಿತಿ ಸಂಗ್ರಹ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಎಷ್ಟು ಕೃಷಿ ಭೂಮಿ ಇದೆ, ಯಾವ ಯಾವ ಬೆಳೆಯನ್ನು ಎಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಹಾಗೂ ಇಳುವರಿ ಪ್ರಮಾಣ ಎಷ್ಟು ಎಂಬ ಮಾಹಿತಿ ಪ್ರತಿ ಎಪಿಎಂಸಿಗಳಲ್ಲಿ ಇರಬೇಕು. ಎಪಿಎಂಸಿಗೆ ಬರುವ ಕೃಷಿ ಉತ್ಪನ್ನಗಳ ಆವಕ ಎಷ್ಟು? ಎಷ್ಟು ಪ್ರಮಾಣದಲ್ಲಿ ಮಾರುಕಟ್ಟೆಯಿಂದ ಹೊರಗೆ ವಹಿವಾಟು ನಡೆಯುತ್ತಿದೆ ಎಂಬ ಬಗ್ಗೆ ತಿಳಿದುಕೊಂಡು ಎಪಿಎಂಸಿಗಳಲ್ಲೇ ವಹಿವಾಟು ನಡೆಯುವಂತೆ ನೋಡಿಕೊಳ್ಳಬೇಕು, ಜಿಲ್ಲೆಯ ಭೌಗೋಳಿಕ ಮಾಹಿತಿ ನಿಮ್ಮ ಬಳಿ ಇರಬೇಕು ಎಂದು ಹೇಳಿದರು.
ಹಲವರು ಟ್ರೇಡ್ ಲೈಸೆನ್ಸ್ ಹೊಂದಿದ್ದರೂ ಖರೀದಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಲ್ಲ. ಬೇರೆ ಬೇರೆ ಉದ್ದೇಶಗಳಿಗೆ ಲೈಸೆನ್ಸ್ ಪಡೆದು ಐದು ವರ್ಷಗಳಿಂದ ಖರೀದಿ ಚಟುವಟಿಕೆಯಲ್ಲಿ ಭಾಗವಹಿಸದವರ ಲೈಸೆನ್ಸ್ ರದ್ದುಪಡಿಸಿ ಎಂದು ಸೂಚಿಸಿದರು. ವರ್ತಕರು ಎಪಿಎಂಸಿ ಗೋದಾಮುಗಳ ಬಾಕಿ ಉಳಿಸಿಕೊಂಡಿದ್ದರೆ ವಸೂಲು ಮಾಡಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳ ವೇತನದಲ್ಲಿ ಕಡಿತ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆರ್ಥಿಕ ಅಪರಾಧಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಎಲ್ಲ ಎಪಿಎಂಸಿಗಳ ಆಡಿಟ್ ಮಾಡಿಸಿ ದುರ್ಬಳಕೆ ಕಂಡುಬಂದರೆ ಸಂಬಂಧಪಟ್ಟವರ ಮೇಲೆ ದೂರು ದಾಖಲು ಮಾಡಬೇಕು. ಎಪಿಎಂಸಿಗೆ ಬರಬೇಕಾದ ಬಾಕಿ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ನಿರ್ಲಕ್ಷ್ಯವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ, ಅಪರ ನಿರ್ದೇಶಕ ನಜೀಬುಲ್ಲಾಕಾನ್, ಅಧೀಕ್ಷಕ ಅಭಿಯಂತರ ರಘುನಂದನ್ ಮತ್ತಿತರರು ಉಪಸ್ಥಿತರಿದ್ದರು. ಮೈಸೂರು ಜಿಲ್ಲೆ ಎಂಟು, ಚಾಮರಾಜನಗರ ಜಿಲ್ಲೆಯ ನಾಲ್ಕು ಎಪಿಎಂಸಿಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಟಾರ್ಗೆಟ್ ತಲುಪದಿರಲು ಕಾರಣ ಏನು?
ಮೈಶುಗರ್ಗೆ 2.5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಕೊಟ್ಟಿದ್ದರೂ ಏಕೆ ಗುರಿ ತಲುಪಲಿಲ್ಲ ಎಂದು ಕಬ್ಬು ಅಭಿವೃದ್ಧಿ ಹಾಗು ಸಕ್ಕರೆ ಸಚಿವ ಶಿವಾನಂದ ಪಾಟೀಲ ಪ್ರಶ್ನಿಸಿದರು.
ಕಳೆದ ನವಂಬರ್ 24ರಂದೇ ಮೈಶುಗರ್ನಲ್ಲಿ ಕಬ್ಬು ನುರಿಸುವುದನ್ನು ನಿಲ್ಲಿಸಲಾಗಿದೆ. ಆದರೆ ಸುತ್ತಮುತ್ತಲಿನ ಕಾರ್ಖಾನೆಗಳು ನಂತರವೂ ಕಬ್ಬು ನುರಿಸಿವೆ. ಮುಂದಿನ ಹಂಗಾಮಿನಲ್ಲಿ ನಿಗದಿತ ಗುರಿ ತಲುಪಲು ಹೀಗೆ ಆಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಕ್ಕರೆ ಮಾರಾಟ ಮಾಡಬಾರದು ಎಂದು ಸೂಚನೆ ನೀಡಿದ್ದರೂ ಮಾರಾಟ ಮಾಡಿದ್ದು ಏಕೆ? ಅಡಮಾನ ಇಟ್ಟು ಹೊಣೆಗಾರಿಕೆ ನಿಭಾಯಿಸಲು ಸೂಚನೆ ನೀಡಲಾಗಿತ್ತು. ಆದರೂ ಮಾರಾಟ ಮಾಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೊಲಾಸಿಸ್ಗೆ ಧಾರಣಿ ಬಂದಾಗ ಮಾರಾಟ ಮಾಡಿ ಎಂದು ಸಲಹೆ ನೀಡಿದ ಸಚಿವರು, ಮುಂದಿನ ಹಂಗಾಮು ಆರಂಭವಾಗುವ ವೇಳೆಗೆ ಕಾರ್ಖಾನೆ ದುರಸ್ತಿ, ನಿರ್ವಹಣೆಯನ್ನು ಪೂರ್ಣಗೊಳಿಸಿ ಎಂದು ಸೂಚಿಸಿದರು. ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ, ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ವೀಣಾ ಉಪಸ್ಥಿತರಿದ್ದರು.
Key words: action, clear encroachment, APMC property, Minister, Shivanand Patil-
The post ಎಪಿಎಂಸಿ ಆಸ್ತಿ ಒತ್ತುವರಿ ತೆರವಿಗೆ ತುರ್ತು ಕ್ರಮ ಕೈಗೊಳ್ಳಿ -ಸಚಿವ ಶಿವಾನಂದ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.