ಬೆಂಗಳೂರು, ಮಾರ್ಚ್,13,2025 (www.justkannada.in): ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ನಿವೃತ್ತಿ ವಯಸ್ಸನ್ನು ಪ್ರಸ್ತುತ 60 ವರ್ಷದಿಂದ 65 ವರ್ಷಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ.
ಜಯದೇವ ಹೃದಯ ರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರೊಂದಿಗೆ ಗುರುವಾರ ನಡೆದ ಸಂವಾದದ ವೇಳೆ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಈ ವಿಷಯ ತಿಳಿಸಿದರು.
ಸಂವಾದದ ವೇಳೆ ಜಯದೇವದ ಹಿರಿಯ ವೈದ್ಯರು ಕೆಲವು ವಿಷಯ ಪ್ರಸ್ತಾಪಿಸಿದರು. ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ಪಡೆದ ನಂತರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸಲು ಅತಿ ಹೆಚ್ಚು ವರ್ಷಗಳನ್ನು ವ್ಯಯಿಸಿರಲಾಗಿರುತ್ತದೆ. 60 ನೇ ವಯಸ್ಸಿನಲ್ಲಿ ನಿವೃತ್ತರಾಗುವ ಮೊದಲು ನಮಗೆ 20-25 ವರ್ಷಗಳ ಕಾಲ ಮಾತ್ರ ಸೇವೆ ಸಲ್ಲಿಸಲು ಅವಕಾಶ ಲಭ್ಯವಾಗಿರುತ್ತದೆ ಎಂದು ವೈದ್ಯರು ಗಮನ ಸೆಳೆದರು.
ಈ ವೇಳೆ ಸಚಿವ ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಅನುಭವಿ ವೈದ್ಯರನ್ನು ಉಳಿಸಿಕೊಳ್ಳಲು ನಿವೃತ್ತಿ ವಯಸ್ಸನ್ನು ವಿಸ್ತರಿಸಲು ಸರ್ಕಾರ ಉತ್ಸುಕವಾಗಿದೆ ಎಂದು ವೈದ್ಯಕೀಯ ವೃತ್ತಿಪರರಿಗೆ ಭರವಸೆ ನೀಡಿದರು.
ಉತ್ತಮ ಆರೋಗ್ಯ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ನಮ್ಮ ಅನುಭವಿ ವೈದ್ಯರ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಲು, ನಾನು ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಈ ವಿಷಯವನ್ನು ಚರ್ಚಿಸುತ್ತೇನೆ ಮತ್ತು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿನ ವೈದ್ಯರ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಪ್ರಸ್ತಾಪಿಸುತ್ತೇನೆ” ಎಂದು ಡಾ. ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ವಿಮೆ ಸೇವೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ವೈದ್ಯರಿಗೆ ಗಮನಾರ್ಹ ಸೌಲಭ್ಯಗಳನ್ನು ಸಚಿವ ಶರಣ ಪ್ರಕಾಶ್ ಪಾಟೀಲ್ ಇದೇ ಸಂದರ್ಭದಲ್ಲಿ ಘೋಷಿಸಿದರು.
ಪ್ರಸ್ತುತ, ಈ ವೈದ್ಯರು ಯಾವುದೇ ಸರ್ಕಾರಿ ವಿಮಾ ಯೋಜನೆಯಡಿಯಲ್ಲಿ ಒಳಗೊಳ್ಳುವುದಿಲ್ಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಈಗಾಗಲೇ ಲಭ್ಯವಿರುವ ಜೀವನ ಸಂಜೀವಿನಿ ಎಂಬ ಯೋಜನೆಯನ್ನು ಜಾರಿಗೆ ತರಲು ಯೋಜಿಸುತ್ತಿದೆ ಎಂದು ತಿಳಿಸಿದರು.
ವೈದ್ಯಕೀಯ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು, ಜಯದೇವ ಆಸ್ಪತ್ರೆಗೆ ರೋಬೋಟಿಕ್ ಶಸ್ತ್ರಚಿಕಿತ್ಸಾ ಸೌಲಭ್ಯಗಳನ್ನು ಪರಿಚಯಿಸಲು ಸರ್ಕಾರ ಹೆಚ್ಚುವರಿ ಹಣವನ್ನು ಮಂಜೂರು ಮಾಡುತ್ತಿದೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಘೋಷಿಸಿದರು.
“ವೈದ್ಯಕೀಯ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಮುಂಚೂಣಿ ತಂತ್ರಜ್ಞಾನ ತರಲು, ಜಯದೇವ ಸಂಸ್ಥೆಯಲ್ಲಿ ಆಧುನಿಕ ಸಾಧನಗಳನ್ನು ಅಳವಡಿಸಲು ಮತ್ತು ಮೂಲಸೌಕರ್ಯ ಅಭಿವೃದ್ಧಿಪಡಿಸಲು ನಾವು ಬದ್ಧರಾಗಿದ್ದೇವೆ ಎಂದರು.
Key words: Super Specialty Hospital, Doctors, Retirement, Age, Increase, Sharan Prakash Patil
The post ಸೂಪರ್ ಸ್ಪೆಷಾಲಿಟಿ ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಚಿಂತನೆ: ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.