ಬೆಂಗಳೂರು, ಮಾರ್ಚ್ 11,2025 (www.justkannada.in): ಕೆಂಪು ಮೆಣಸಿನಕಾಯಿಗೆ ತುರ್ತಾಗಿ ಬೆಲೆ ಕೊರತೆ ಪಾವತಿ ಯೋಜನೆ ದರ ನಿಗದಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಸಂಬಂಧ ಪ್ರಧಾನಿ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಅವರಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಾಗಿ ಕೆಂಪು ಮೆಣಸಿನಕಾಯಿ ಬೆಳೆಗಾರರಿದ್ದಾರೆ. ಕೆಂಪು ಮೆಣಸಿನಕಾಯಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕೂಡಲೇ ಕೆಂಪು ಮೆಣಸಿನಕಾಯಿಗೆ ಪಿಡಿಪಿ ದರ ನಿಗದಿ ಮಾಡಿ. ಇದರಿಂದ ಕೆಂಪು ಮೆಣಸಿನಕಾಯಿ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಕೋರಿದ್ದಾರೆ.
ಕರ್ನಾಟಕದಲ್ಲಿ, ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಲಕ್ಷಾಂತರ ಕೆಂಪು ಮೆಣಸಿನಕಾಯಿ ರೈತರ ಪರಿಸ್ಥಿತಿ ಕಂಡು ತೀವ್ರ ಕಳವಳದಿಂದ ನಾನು ನಿಮಗೆ ಬರೆಯುತ್ತಿದ್ದೇನೆ. ಮಾರುಕಟ್ಟೆಯಲ್ಲಿ ಕೆಂಪು ಮೆಣಸಿನಕಾಯಿ ಬೆಲೆ ತೀವ್ರ ಕುಸಿತ ಕಂಡಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಕೆಂಪು ಮೆಣಸಿನಕಾಯಿಗಳಿಗೆ (ಗುಂಟೂರು ಮೆಣಸಿನಕಾಯಿ) ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (ಎಂಐಎಸ್) ಅಡಿಯಲ್ಲಿ ಬೆಲೆ ಕೊರತೆ ಪಾವತಿ (ಪಿಡಿಪಿ) ಯೋಜನೆಯನ್ನು ಭಾರತ ಸರ್ಕಾರ ನಿಗದಿಪಡಿಸಿದೆ. ಉತ್ಪಾದನೆಯ ಶೇ 25 ರಷ್ಟುವರೆಗೆ ವ್ಯಾಪ್ತಿಯೊಂದಿಗೆ ಕ್ವಿಂಟಲ್‌ಗೆ 11,781 ಕನಿಷ್ಠ ಮಧ್ಯಸ್ಥಿಕೆ ಬೆಲೆ (ಎಂಐಪಿ) ನಿಗದಿಪಡಿಸಿದೆ. ಇದು ಸ್ವಾಗತಾರ್ಹ ಹೆಜ್ಜೆಯಾಗಿದ್ದರೂ, ಕರ್ನಾಟಕದ ಕೆಂಪು ಮೆಣಸಿನಕಾಯಿ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಇನ್ನೂ ಪರಿಹಾರವಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ, ಗುಂಟೂರು ವಿಧದ ಕೆಂಪು ಮೆಣಸಿನಕಾಯಿ (ಮಳೆಯಾಶ್ರಿತ) ಬೆಳೆ ಬೆಳೆಯಲು ಕರ್ನಾಟಕ ಕೃಷಿ ದರ ಆಯೋಗದ ಕ್ವಿಂಟಲ್ ಗೆ 12,675 ರೂ. ತಗಲುತ್ತೆ ಎಂದು ಅಂದಾಜಿಸಿದೆ. ಕರ್ನಾಟಕದಲ್ಲಿ ಒಣಮೆಣಸಿನಕಾಯಿ ಉತ್ಪಾದನೆ ವೆಚ್ಚ ಪ್ರತಿ ಕ್ವಿಂಟಾಲ್ ಗೆ 12,675 ರೂ. ಇರುವುದಾಗಿ ಕರ್ನಾಟಕ ಕೃಷಿ ಬೆಲೆ ಆಯೋಗ ನಿಗದಿಪಡಿಸಿದೆ. ಆದರೆ ರೈತರು ಪ್ರತಿ ಕ್ವಿಂಟಾಲ್ ಗೆ 8,300 ರೂ.ಗೆ ಒಣಮೆಣಸಿನಕಾಯಿ ಮಾರಾಟ ಮಾಡುತ್ತಿದ್ದಾರೆ. ಇದು ರೈತರಿಗೆ ದೊಡ್ಡ ಆರ್ಥಿಕ ಹೊಡೆತ ನೀಡಿದೆ. ಬರಪೀಡಿತ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅತಿ ಹೆಚ್ಚು ಒಣಮೆಣಸಿನಕಾಯಿ ಬೆಳೆಯಲಾಗುತ್ತದೆ. ಬೆಲೆ ಕುಸಿತದಿಂದ ಅವರು ಸಾಲದ ಸುಳಿಗೆ ಸಿಲುಕುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶಿಸಿ ಬೆಲೆ ಕೊರತೆ ಪಾವತಿ ಯೋಜನೆಯನ್ನು ಜಾರಿಗೊಳಿಸುವುದು ಅನಿವಾರ್ಯ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
Key words: Fix, PDP price, red chillies, CM Siddaramaiah, PM Modi
The post ಕೆಂಪು ಮೆಣಸಿನಕಾಯಿಗೆ ಪಿಡಿಪಿ ದರ ನಿಗದಿಪಡಿಸಿ: ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.